ಟ್ರಿನಿಟಿ -
ಕ್ರೈಸ್ತಧರ್ಮದಲ್ಲಿನ ಒಂದು ತತ್ತ್ವ. ಇದನ್ನು ತ್ರಿಮೂರ್ತಿವಾದ ಎಂದು ಕರೆಯಬಹುದು. ಪಿತ, ಸುತ ಹಾಗೂ ಪವಿತ್ರಾತ್ಮರೆಲ್ಲ ಏಕೈಕವಾದ ದೈವದಲ್ಲಿ ಒಳಗು ಎನ್ನುವುದು ಇದರ ಅರ್ಥ. ಅಥವಾ ಒಬ್ಬನೇ ಆದ ದೇವರ ಮೂರು ಬಗೆಯ ಅಭಿವ್ಯಕ್ತಿ ಪಿತ, ಸುತ ಹಾಗೂ ಪವಿತ್ರಾತ್ಮ ಎಂದು ಮೂರು ಬಗೆಯಲ್ಲಿ ತೋರುತ್ತಿದೆ ಎಂದು ಅರ್ಥ. ಪರಮಾತ್ಮನಲ್ಲಿ ಐಕ್ಯರಾಗಿರುವ ವ್ಯಕ್ತಿತ್ರಯಗಳಿಗೆ ಏಕೈಕ ಸ್ವಭಾವವಿದೆ ಮತ್ತು ಸತ್ತ್ವವಿದೆ. ಪ್ರತಿವ್ಯಕ್ತಿಯ ಪೂರ್ಣ ಸ್ವಭಾವ, ಸತ್ತ್ವಗಳನ್ನೊಳಗೊಂಡಿದ್ದು ಅವರೆಲ್ಲರೂ ಅಮಿತಶಕ್ತಿ, ಜ್ಞಾನ ಮತ್ತು ನಿತ್ಯತ್ವದಲ್ಲಿ ಸಮಾನರಾಗಿದ್ದಾರೆ.

	ಪರಮಾತ್ಮನ ಈ ತ್ರಯೈಕತ್ವ ಸ್ವರೂಪದರ್ಶನವನ್ನು ಬೈಬಲಿನ ಹೊಸ ಒಡಂಬಡಿಕೆಯಲ್ಲಿ ಕಾಣಬಹುದು. ಹಳೆಯ ಒಡಂಬಡಿಕೆಯಲ್ಲಿ ಕೆಲವೆಡೆ ಈ ತತ್ತ್ವದ ಅಸ್ತಿತ್ವವನ್ನು ನಿರೂಪಿಸುವ ಕೆಲವು ಘಟನೆಗಳು ಬರುವುದಾದರೂ ಇದರ ಶಾಸ್ತ್ರೀಯ ನಿರೂಪಣೆಯನ್ನು ಹೊಸ ಒಡಂಬಡಿಕೆಯಲ್ಲಿ ಕಾಣಬಹುದು. ಆ ಗ್ರಂಥದ ಸಾರಸರ್ವಸ್ವವೇ ಇದೆಂದು ಹೇಳುವುದುಂಟು.

	ಕ್ರಿಸ್ತ ತಾನು ಪರಮಾತ್ಮನ ಕುಮಾರನೆಂದು ಸಾರಿದಾಗ ಪರಮಾತ್ಮನ ತ್ರಯೈಕತ್ವ ರಹಸ್ಯಕ್ಕೆ ಮೊತ್ತಮೊದಲ ಸಾಕ್ಷ್ಯಾಧಾರ ದೊರಕುತ್ತದೆ. ಕ್ರಿಸ್ತನ ಮತ್ತು ಪರಮಾತ್ಮನ ಈ ಸಂಬಂಧ ಹೊಸ ಒಡಂಬಡಿಕೆಯ ಅನೇಕ ಕಡೆ ವ್ಯಕ್ತವಾಗುತ್ತದೆ. ಪಿತನಲ್ಲದೆ ಇನ್ನಾರು ಸುತನನ್ನೂ ಅರಿತಿಲ್ಲ ; ಸುತನನ್ನುಳಿದು ಪಿತನನ್ನು ಅರಿತವರು ಇನ್ನಾರು ಇಲ್ಲ (ಮ್ಯಾತ್ಯೂ). ನಾನು ಪಿತನಿಂದ ಹೊರಟವನು ಈ ಲೋಕಕ್ಕೆ ಬಂದಿರುತ್ತೇನೆ, ಈ ಲೋಕದಿಂದ ಮತ್ತೆ ನಾನು ಪಿತನೆಡೆಗೇ ಹೋಗುತ್ತೇನೆ (ಜಾನ್). 

ಪಿತ ಮತ್ತು ಸುತನ ಅನ್ಯೋನ್ಯ ಪ್ರೇಮದ ಪರಿಣಾಮವೇ ಪವಿತ್ರಾತ್ಮ. ಪರಮತ್ರಿತ್ವದ ರಹಸ್ಯದ ಪ್ರಕಟಣೆಗೆ ಪವಿತ್ರಾತ್ಮರು ಮಾಧ್ಯಮ. ಇವರೂ ಪಿತನಿಂದ ಹೊರಟು ಸುತನ ಮಹಿಮೆಗೆ ಹಾಗೂ ಸಾಕ್ಷಿಗೆ ಕಾರಣರಾಗುತ್ತಾರೆ.

	ಸ್ನಾನಿಕ ಜಾನನಿಂದ ಕ್ರಿಸ್ತ ಜ್ಞಾನಸ್ನಾನದ ದೀಕ್ಷೆ ಸ್ವೀಕರಿಸಿದಾಗ ಪರಮಾತ್ಮನ ಈ ತ್ರಯೈಕತ್ವದ ಅಸ್ತಿತ್ವಕ್ಕೆ ಸಾಕ್ಷಿ ಲಭಿಸುತ್ತದೆ. ಕ್ರಿಸ್ತ ಅನೇಕ ವೇಳೆ ಪಿತ ಮತ್ತು ಪವಿತ್ರಾತ್ಮರನ್ನು ಕುರಿತು ಪ್ರಸ್ತಾಪಿಸಿದ್ದಾನೆ. ತಾನು ಪಿತನಲ್ಲ, ಪಿತ ತನ್ನಲ್ಲಿ. ಪವಿತ್ರಾತ್ಮ ಸತ್ಯಚೇತನವೆನಿಸಿದ್ದು ಕ್ರಿಸ್ತನ ಶಿಷ್ಯರ ಮೇಲೆ ಬಂದಾಗ. ಶಿಷ್ಯರಿಗೂ ತ್ರಯೈಕತ್ವ ಪರಮಾತ್ಮನ ಅನ್ಯೋನ್ಯಸಂಬಂಧದ ಅರಿವುಂಟಾದುದೂ ಆಗಲೆ.

	ಪರಮ ತ್ರಿತ್ವದ ಬೋಧನೆ ಕ್ರೈಸ್ತರಿಗೆ ಒಂದು ಅಧ್ಯಯನದ ವಿಷಯವಷ್ಟೇ ಅಲ್ಲ. ಅದು ಅವರ ಧಾರ್ಮಿಕ ಜೀವನದ ಪ್ರಥಮ ಸೂತ್ರ, ಜೀವಾಳ. ಕ್ರಿಸ್ತ ತನ್ನ ಸ್ವರ್ಗಾರೋಹಣದ ವೇಳೆಯಲ್ಲಿ ತನ್ನ ಶಿಷ್ಯರಿಗೆ ಹೀಗೆಂದು ವಿಧಿಸಿದ : ಇಹಪರದಲ್ಲಿ ನನಗೆ ಅಧಿಕಾರ ಲಭಿಸಿದೆ. ಲೋಕದ ನಾಲ್ದೆಸೆಗಳಿಗೆ ಸಂಚರಿಸಿ ಅನುಯಾಯಿಗಳನ್ನು ಗಳಿಸುವುದು ನಿಮ್ಮ ಕರ್ತವ್ಯ. ಪಿತ, ಸುತ ಮತ್ತು ಪವಿತ್ರಾತ್ಮರ ನಾಮದಲ್ಲಿ ಅವರಿಗೆ ಜ್ಞಾನಸ್ನಾನ ಕೊಡಬೇಕು. ಜ್ಞಾನಸ್ನಾನ ದೀಕ್ಷಾ ಸಂಸ್ಕಾರ ವ್ಯಕ್ತಿಯನ್ನು ಕ್ರೈಸ್ತನನ್ನಾಗಿ ಪರಿವರ್ತಿಸಿ ತ್ರಯೈಕನಾದ ದೇವರೊಡನೆ ಒಂದಾಗುವ ಅವಕಾಶವನ್ನು ಕಲ್ಪಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ಕ್ರೈಸ್ತನೂ ಪರಮತ್ರಿತ್ವದಲ್ಲಿ ಒಂದಾಗಿರುವ ವ್ಯಕ್ತಿ. ಪರಮಾತ್ಮನನ್ನು ತಂದೆ ಎಂದು ಸಂಬೋಧಿಸುವ ಇವರು ಪರಮಾತ್ಮನ ಮಕ್ಕಳೆನಿಸಿಕೊಳ್ಳುತ್ತಾರೆ. ಪವಿತ್ರಾತ್ಮರ ಮೂಲಕವಾಗಿ ಕ್ರಿಸ್ತನಲ್ಲಿ ಒಂದಾಗಿ ಪಿತನ ಜೀವನದಲ್ಲಿ ಪಾಲ್ಗೊಳ್ಳುತ್ತಾರೆ.

	ಕ್ರೈಸ್ತರ ಪ್ರತಿಯೊಂದು ಪ್ರಾರ್ಥನೆ, ಪೂಜೆ, ಸಂಸ್ಕಾರಗಳ ಪ್ರಾರಂಭ ಹಾಗೂ ಮುಕ್ತಾಯ ಪರಮತ್ರಿತ್ವದ ನಾಮೋಚ್ಚರಣೆಯ ಮೂಲಕವಾಗಿ ನಡೆಯುತ್ತದೆ.										(ಡಿ.ವಿ.ಡಬ್ಲ್ಯೂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ